ಬುದ್ಧಿಪ್ರಧಾನವಾದ
ತತ್ತ್ವಶೋಧನೆಗೆ ಕೇವಲ ಬುದ್ಧಿ (ವಿಚಾರ) ಅಥವಾ ತರ್ಕವೊಂದೇ ಸಾಧನವೆಂದು ಸಾರುವ ವಾದಕ್ಕೆ ಈ ಹೆಸರಿದೆ (ಇಂಟಲೆಕ್‍ಚ್ಯುಯಲಿಸಮ್). ಇದನ್ನು ಸಂಪ್ರದಾಯವಾದ, ಪ್ರತ್ಯಕ್ಷಾನುಭವವಾದ ಮತ್ತು ಅನುಭೂತಿವಾದ ಎಂಬ ಮೂರು ಹಂತಗಳಲ್ಲಿ ಪರಿಶೀಲಿಸಬಹುದು.

	1. ಪ್ರಪಂಚದ ಕೆಲವೊಂದು ಜನಾಂಗ ತನ್ನ ಸಾಮಾಜಿಕ ಚಟುವಟಿಕೆಗಳಿಗೆ ಕೆಲವು ಸಾಂಪ್ರದಾಯಿಕ ನಂಬಿಕೆಗಳನ್ನು ಅವಲಂಬಿಸಿದೆ. ಹಾಗೆಯೇ ಮತಧರ್ಮ ಪ್ರಬಲವಾದ ಕಾಲದಲ್ಲಿ ಜನರು ಕೆಲವು ಮತೀಯ ಗ್ರಂಥಗಳ ಪ್ರಾಮಾಣ್ಯ ಒಪ್ಪಿಕೊಂಡು ಅವುಗಳ ಹೇಳಿಕೆಗಳನ್ನು ಚಾಚೂ ತಪ್ಪದೆ ನಂಬಿ ನಡೆಯುತ್ತಾರೆ. ಹೀಗೆ ಮತ ಗ್ರಂಥಗಳ ಅಥವಾ ಕೆಲವೊಬ್ಬ ಮಹಾಪುರುಷನ ಹೇಳಿಕೆಗಳೇ ಸತ್ಯವೆಂದು ಸಾರುವುದು ಸಂಪ್ರದಾಯವಾದ. ಈ ವಾದದ ಪ್ರಕಾರ ಜ್ಞಾನ ತರ್ಕ ಅಥವಾ ಇಂದ್ರಿಯಾನುಭವವನ್ನು ಅವಲಂಬಿಸಿರುವುದಿಲ್ಲ. ಮತಸ್ಥಾಪಕ ಅಥವಾ ಮತಗ್ರಂಥಗಳೇ ಜ್ಞಾನಸಾಧಕಗಳೆಂಬುದು ಅದರ ಅಭಿಪ್ರಾಯ. ಈ ವಾದ ಗ್ರೀಸ್ ದೇಶದಲ್ಲಿ ಸಾಕ್ರಟೀಸನಿಗಿಂತ ಮೊದಲೂ ಯೂರೊಪಿನ ಸಂಸ್ಕøತಿಯಲ್ಲಿ ಬೇಕನ್ ಮತ್ತು ಡೆಕಾರ್ಟರಿಗೆ ಪೂರ್ವದಲ್ಲೂ ಭಾರತದಲ್ಲಿ ಭಾರತೀಯ ದರ್ಶನಗಳ ಉಗಮಕ್ಕೆ ಮೊದಲೂ ಅಂದರೆ ವೇದಗಳ ಆನಂತರದ ಕಾಲದಿಂದಲೂ ಪ್ರಚಲಿತವಾಗಿತ್ತು.

	ಬುದ್ಧಿ ಪ್ರಧಾನವಾದ ತರ್ಕಕ್ಕೆ ಪ್ರಾಧಾನ್ಯ ನೀಡುವುದರಿಂದ ಮೇಲಿನ ವಾದವನ್ನು ಸಹಜವಾಗಿಯೇ ವಿರೋಧಿಸುತ್ತದೆ. ತತ್ತ್ವನಿರ್ಣಯಕ್ಕೆ ತರ್ಕ ಅಥವಾ ವಿಚಾರವೊಂದೇ ಆಧಾರವೆಂಬ ತನ್ನ ನಿಲವನ್ನು ಈ ರೀತಿ ಸಮರ್ಥಿಸುತ್ತದೆ.

	ಪ್ರಪಂಚದಲ್ಲಿ ಪ್ರಚಲಿತವಾಗಿರುವ ನಂಬಿಕೆಗಳು ಅನೇಕವಿವೆ. ಆ ಎಲ್ಲ ಸಂಪ್ರದಾಯ ಅಥವಾ ನಂಬಿಕೆಗಳು ಒಂದೇ ರೀತಿ ಇರುವುದಿಲ್ಲ. ಅವುಗಳಲ್ಲಿ ಪರಸ್ಪರ ವಿರೋಧಗಳನ್ನು ಕಾಣಬಹುದು. ಪರಸ್ಪರ ಸಾಮರಸ್ಯವಿರುವ ಈ ನಂಬಿಕೆಗಳನ್ನು ತುಲನಾತ್ಮಕವಾಗಿ ವಿಮರ್ಶಿಸಲು ತರ್ಕವನ್ನು ಆಶ್ರಯಿಸಬೇಕಾಗುತ್ತದೆ.

	ಅಲ್ಲದೆ ಸಂಪ್ರದಾಯಾನುಸಾರವಾಗಿ ಬಂದಿರುವ ನಂಬಿಕೆಗಳು ಕೆಲವು ಸಲ ನಮ್ಮ ಪ್ರತ್ಯಕ್ಷ ಅನುಭವಕ್ಕೆ ವಿರುದ್ಧವಾಗಿರುತ್ತವೆ. ಉದಾಹರಣೆಗೆ ಕುದುರೆಗೆ ಇರುವ ಹಲ್ಲುಗಳ ಸಂಖ್ಯೆಯನ್ನು ನಿರ್ಧರಿಸಲು ಮತಗ್ರಂಥಗಳನ್ನು ಅವಲಂಬಿಸುತ್ತಿದ್ದ ಕಾಲವೊಂದಿತ್ತು. ಹಾಗೆಯೇ ಭೂಮಿ ಸೂರ್ಯನ ಸುತ್ತ ಪರಿಭ್ರಮಿಸುತ್ತದೆ ಎಂಬುದು ವೈಜ್ಞಾನಿಕವಾಗಿ ತಿಳಿಯುವ ಮುನ್ನ ಸೂರ್ಯನೇ ಭೂಮಿಯ ಸುತ್ತ ಪರಿಭ್ರಮಿಸುತ್ತಾನೆ ಎಂಬ ವಾದ ಪ್ರಚಲಿತವಾಗಿತ್ತು. ಪ್ರತ್ಯಕ್ಷ ವಿರುದ್ಧವಾದ ಇಂಥ ನಂಬಿಕೆಗಳು ಬುದ್ಧಿ ಪ್ರಧಾನವಾದದ ಪ್ರಕಾರ ತ್ಯಾಜ್ಯ.

	ಕೆಲವು ವೇಳೆ ಒಂದೇ ಸಂಪ್ರದಾಯದಲ್ಲಿ ಅನೂಚಾನವಾಗಿ ಬಂದಿರುವ ನಂಬಿಕೆಗಳು ಅಸಂಗತವೂ ಪರಸ್ಪರ ವಿರುದ್ಧವೂ ಆಗಿರುತ್ತವೆ. ಆಗಲೂ ಬೌದ್ಧಿಕ ವಿಚಾರಕ್ಕೆ ಹೆಚ್ಚು ಪ್ರಾಧಾನ್ಯ ನೀಡಿ, ಸಂಪ್ರದಾಯದ ಅರ್ಥವನ್ನು ಸರಿಯಾಗಿ ಊರ್ಜಿತಗೊಳಿಸಲು ಯತ್ನಿಸಬೇಕು.

	ಹೀಗೆ ಹಿಂದಿನಿಂದಲೂ ಅನುಚಾನವಾಗಿ ಬಂದಿರುವ ಕೆಲನಂಬಿಕೆಗಳನ್ನು ಪರಿಷ್ಕರಿಸಿ ಯಥಾರ್ಥ ನಿರ್ಣಯಕ್ಕೆ ಬರಲು ವಿಚಾರ, ಬುದ್ಧಿ ಅಥವಾ ತರ್ಕವನ್ನು ಅವಲಂಬಿಸಬೇಕಾಗುತ್ತದೆ. ಇದರ ಫಲವಾಗಿ ಬುದ್ಧಿ ಪ್ರಧಾನವಾದ ತಲೆಯೆತ್ತುತ್ತದೆ.

	2. ಆಧುನಿಕ ವಿಜ್ಞಾನಯುಗದ ಆರಂಭದಲ್ಲಿ ಮತ್ತೊಂದು ವಾದ ತಲೆಯೆತ್ತಿತ್ತು. ಅದರ ಪ್ರಕಾರ ತತ್ತ್ವನಿರ್ಣಯಕ್ಕೆ ಸರಿಯಾದ ಸಾಧನ ಇಂದ್ರಿಯಾನುಭವ ಮಾತ್ರ. ಈ ವಾದ ಇಂದ್ರಿಯಾವಲಂಬಿತವಾದ ಅವಲೋಕನ ಮತ್ತು ಪ್ರಯೋಗಗಳಿಗೆ ವಿಶೇಷ ಪ್ರಾಧಾನ್ಯ ನೀಡಿದ್ದಿತು. ಇದನ್ನೇ ಪ್ರತ್ಯಕ್ಷ ಪ್ರಮಾಣವಾದವೆಂದು ಹೇಳುವುದು.

	ಬುದ್ಧಿ ಪ್ರಧಾನವಾದ ಮೇಲಿನ ವಾದವನ್ನು ವಿರೋಧಿಸುತ್ತದೆ. ಅದರ ಪ್ರಕಾರ ಕೇವಲ ಇಂದ್ರಿಯಗಳ ಮೂಲಕ ನಿಖರವೂ ಸಾರ್ವಕಾಲಿಕ ಸತ್ಯವೂ ಆಗಿರುವ ಜ್ಞಾನವನ್ನು ಪಡೆಯಲಾಗುವುದಿಲ್ಲ. ಇಂದ್ರಿಯಗಳ ಮೂಲಕ ಸ್ಥಾಪಿತವಾದ ಸತ್ಯ ಸಂಭಾವ್ಯವಾಗಿರುತ್ತದೆ. ನಿಷ್ಕøಷ್ಟನಾಗಿರುವುದಿಲ್ಲ. ಇಂದ್ರಿಯಗಳು ಜ್ಞಾನ ಸಾಧನಗಳಲ್ಲವೆಂಬ ಭಾವನೆಯನ್ನು ಪ್ಲೇಟೋವಿನ ಚಿಂತನೆಯಲ್ಲಿ ಗುರುತಿಸಬಹುದು. ಆದರೂ ಈ ಭಾವನೆಗೆ ವಿಶೇಷವಾದ ಆಧ್ಯತೆ ನೀಡಿ ಶುದ್ಧವಾದ ತರ್ಕವೊಂದೇ ಜ್ಞಾನಸಾಧನವೆಂಬುದನ್ನು ನಿರೂಪಿಸಿದವ ಆಧುನಿಕ ತತ್ತ್ವಶಾಸ್ತ್ರದ ಜನಕ ಡೆಕಾರ್ಟ್. ನಿಖರವಾದ ತಾತ್ತ್ವಿಕ ತೀರ್ಮಾನವನ್ನು ಪಡೆಯಲೆಂದು ಈತ ಗಣಿತ ಪದ್ಧತಿಯನ್ನು ಅನುಸರಿಸಿದ. ಗಣಿತ ಕೇವಲ ಬೌದ್ಧಿಕ ಆಲೋಚನೆಗಳನ್ನು ಅವಲಂಬಿಸುತ್ತದೆ. ಸತಃಸಿದ್ಧವಾಗಿರುವ ಕೆಲವು ತತ್ತ್ವಗಳಿಂದ ಖಚಿತವೂ ಸಾರ್ವಕಾಲಿಕವೂ ಆದ ತೀರ್ಮಾನಗಳನ್ನು ಹೊರಗೆಳೆಯುತ್ತದೆ. ಗಣಿತದ ಈ ಪ್ರಕ್ರಿಯೆಯಲ್ಲಿ ಇಂದ್ರಿಯಗಳ ಪಾತ್ರವಿರುವುದಿಲ್ಲ. ಗಣಿತ ಪದ್ಧತಿಯನ್ನು ತತ್ತ್ವಶಾಸ್ತ್ರ ಅಳವಡಿಸಿಕೊಂಡಲ್ಲಿ ಅದರ ತೀರ್ಮಾನಗಳು ಗಣಿತ ತೀರ್ಮಾನಗಳಂತೆ ನಿಷ್ಕøಷ್ಟವಾಗಿರಬಲ್ಲವೆಂದು ಡೆಕಾರ್ಟ್ ವಾದಿಸಿದ. ಇವನ ಮೇಲ್ಪಂಕ್ತಿಯನ್ನು ಸ್ಪಿನೋeóï, ಲಿಬ್ನಿಜ್ ಮುಂತಾದ ತತ್ತ್ವಜ್ಞಾನಿಗಳು ಅನುಸರಿಸಿದರು.

ಆದರೆ ಬುದ್ಧಿ ಪ್ರಧಾನವಾದ ಇಂದ್ರಿಯಗಳ ಪ್ರಾಮುಖ್ಯವನ್ನು ಹೊರದೂಡಿ ಕೇವಲ ವಿಚಾರಕ್ಕೆ ಮಾತ್ರ ಪ್ರಾಧಾನ್ಯ ನೀಡುತ್ತದೆ. ಇಂದ್ರಿಯಗೋಚರ ಭೌತ ತತ್ತ್ವದ ಅಸ್ತಿತ್ವವನ್ನು ಊಹೆಯ ಮೂಲಕ ಸ್ಥಾಪಿಸುವುದು ಡೆಕಾರ್ಟನ ವೈಶಿಷ್ಟ್ಯ.

	ಮುಂದೆ ತತ್ತ್ವಶಾಸ್ತ್ರ ಬೆಳೆದಂತೆ ಪ್ರತಿಯೊಬ್ಬನೂ ತನ್ನ ಪ್ರತಿಯೊಂದು ಅಭಿಪ್ರಾಯವನ್ನೂ ಗಣಿತ ರೀತ್ಯ ನಿರೂಪಿಸುವ ಪ್ರವೃತ್ತಿ ಆರಂಭವಾಯಿತು. ಇಂದ್ರಿಯಗಳ ಪಾತ್ರವನ್ನು ಸಂಪೂರ್ಣವಾಗಿ ಅಲಕ್ಷಿಸಲಾಯಿತು. ಈ ಪ್ರವೃತ್ತಿಯನ್ನೇ ಮುಂದೆ ಕ್ಯಾಂಟ್ ಎಂಬ ಜರ್ಮನ್ ತಾತ್ತ್ವಿಕ ಡಾಗ್ ಮ್ಯಾಟಿಸಮ್ ಎಂದು ಕರೆದ. ಈತ ಬುದ್ಧಿ ಎಷ್ಟೇ ಪ್ರಧಾನವಾಗಿದ್ದರೂ ಇಂದ್ರಿಯಗಳ ಸಹಾಯವಿಲ್ಲದೆ ತತ್ತ್ವ ನಿರ್ಣಯ ಮಾಡಲಾಗದೆಂದು ನುಡಿದ.

	3. ಈಚಿನ ಇನ್ನೊಂದು ವಾದವೇ ಅನುಭೂತಿವಾದ. ಬುದ್ಧಿತತ್ತ್ವದ ಪರೋಕ್ಷಜ್ಞಾನವನ್ನು ನೀಡಿದರೆ ಅನುಭೂತಿ ತತ್ತ್ವದ ಅಪರೋಕ್ಷ ಅಥವಾ ನೇರ ಜ್ಞಾನವನ್ನು ನೀಡುತ್ತದೆ. ಈ ಅನುಭೂತಿ ಕಲೆ, ಸಾಹಿತ್ಯ, ಧರ್ಮ ಮೊದಲಾದ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಬುದ್ಧಿ ಜಡವೂ ವಿಭಕ್ತವೂ ಆದ ಪದಾರ್ಥವನ್ನು ತೋರಿಸಿದರೆ ಅನುಭೂತಿ ಅಖಂಡ ಚೈತನ್ಯವನ್ನು ಪ್ರಕಾಶಗೊಳಿಸುತ್ತದೆ. ಧರ್ಮ ಶ್ರದ್ಧಾಳುಗಳೆಲ್ಲ ಅನುಭೂತಿವಾದವನ್ನು ತಮ್ಮ ಅಭಿನಿವೇಶಗಳಿಗೆ ಹೊಂದಿಸಿಕೊಳ್ಳಲು ಪ್ರಯತ್ನಿಸಿದರು. ಬುದ್ಧಿಮಾರ್ಗದ ಪರಿಮಿತಿಯನ್ನು ಅಪೇಕ್ಷಿಸುವ ಎಲ್ಲ ಪಂಥಗಳಿಗೂ ಈ ವಾದ ಅವಲಂಬನ ನೀಡಿತು. ಭಾರತೀಯರೂ ಒಂದಲ್ಲ ಒಂದು ರೀತಿಯಲ್ಲಿ ಅನುಭೂತಿವಾದವನ್ನು ಅಳವಡಿಸಿಕೊಂಡಿರುವರು. ಆಂಗ್ಲದೇಶದ ದಾರ್ಶನಿಕ ಎಫ್.ಎಚ್. ಬ್ರಾಡ್ಲೆ ಅನುಭೂತಿವಾದವನ್ನು ಅನುಮೋದಿಸಿ ಬುದ್ಧಿ ಆದ್ಯಂತಿಕ ತತ್ತ್ವನಿರ್ಣಯಕ್ಕೆ ಸಾಧನವಲ್ಲ ಎನ್ನುತ್ತಾನೆ.

	ಆದರೆ ಸಂಪ್ರದಾಯವಾದವಾಗಲೀ ಪ್ರತ್ಯಕ್ಷಾನುಭವವಾದವಾಗಲೀ ಅನುಭೂತಿವಾದವಾಗಲೀ ಬುದ್ಧಿಯ ಪ್ರಾಮುಖ್ಯವನ್ನು ಸಂಪೂರ್ಣವಾಗಿ ಅಲಕ್ಷಿಸಲು ಸಾಧ್ಯವಿಲ್ಲ. ಪ್ರತಿಯೊಂದು ವಾದವೂ ತನ್ನ ನಿಲವನ್ನು ಸ್ಥಾಪಿಸಲು ತರ್ಕದ ನೆರವನ್ನು ಪಡೆಯಲೇಬೇಕು. ಬುದ್ಧಿಯನ್ನು ಸಂಪೂರ್ಣವಾಗಿ ಅಲಕ್ಷಿಸಿ ಒಂದು ಸತ್ಯಸೌಧವನ್ನು ನಿರ್ಮಿಸುವುದು ಅಸಾಧ್ಯ. ತತ್ತ್ವನಿರ್ಣಯಕ್ಕೆ ಬುದ್ಧಿಯೊಂದೇ ಅಂತಿಮ ಸಾಧನವಾಗಲಾರದೆಂಬುದನ್ನು ಒಪ್ಪಿಕೊಳ್ಳಬಹುದು. ಆದರೆ ತತ್ತ್ವ ನಿರ್ಣಯದಲ್ಲಿ ಅದರ ಪ್ರಾಮುಖ್ಯವನ್ನು ಅಲಕ್ಷಿಸುವುದು ಸರಿಯಲ್ಲ. ಭಾರತೀಯ ದರ್ಶನಗಳು ಪ್ರತ್ಯಕ್ಷ, ಅನುಮಾನ, ಶಬ್ದ ಮತ್ತು ಯೋಗಜನ್ಯ ಪ್ರತ್ಯಕ್ಷವೆಂಬ ಪ್ರಮಾಣಗಳಿಗೆ ಪ್ರಾಧಾನ್ಯ ಕೊಡುವುದಕ್ಕೆ ಪ್ರಾಯಶಃ ಇದೇ ಕಾರಣವಿರಬಹುದು.						
(ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ